ತಿಳಿಗಾಳಿಗಾಗಿ ತುಳಿ ಗಾಲಿ!

ಪರಿಚಯ

“ಟ್ರಿಣ್‍ಟ್ರಿಣ್” ಎಂಬುದು “ಸಾಂಸ್ಕೃತಿಕ ರಾಜಧಾಮ”, “ದೇಶದ ಅತ್ಯಂತ ಸ್ವಚ್ಛ ನಗರ” ಮತ್ತು “ಜಗದ್ವಿಖ್ಯಾತ ಪಾರಂಪರಿಕ ನಗರ” ಎನಿಸಿರುವ ಮೈಸೂರು ನಗರದಲ್ಲಿ ಸಂಚರಿಸುವವರ ಸೌಲಭ್ಯಕ್ಕಾಗಿ ಪ್ರಾರಂಭಿಸಿರುವ  ಒಂದು ವಿಶಿಷ್ಟ “ಸಾರ್ವಜನಿಕ ಸೈಕಲ್ ವಿನಿಯೋಗ” (ಪಿಬಿಎಸ್) ವ್ಯವಸ್ಥೆ. ತನ್ನ ಜನಜೀವನ ಶೈಲಿ, ಇತಿಹಾಸ,  ಭೌಗೋಳಿಕ ರಚನೆ ಮತ್ತು ಪರಿಸರ-ಸ್ನೇಹಿ ಬಲಗಳಿಂದಾಗಿ, ಮೈಸೂರು ನಗರವು ಈ ಸೌಲಭ್ಯದ ಮನ್ನಣೆಗೆ ಬಹು ಯೋಗ್ಯವಾಗಿ ಪಾತ್ರವಾಗಿದೆ.

“ಟ್ರಿಣ್‍ಟ್ರಿಣ್” ಯೋಜನೆಯು ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು  ಮೈಸೂರು ಮಹಾನಗರ ಪಾಲಿಕೆಯವರ ಸಂಯುಕ್ತ ಉಪಕ್ರಮವಾಗಿದ್ದು,  ವಿಶ್ವಬ್ಯಾಂಕ್‍ನ “ಜಾಗತಿಕ ಪರ್ಯಾವರಣ ಸೌಲಭ್ಯ ಯೋಜನೆ” ಅಡಿಯಲ್ಲಿ ಧನ ಆಧಾರವನ್ನು ಪಡೆದಿದೆ.

“ಸಾರ್ವಜನಿಕ ಸೈಕಲ್ ವಿನಿಯೋಗ” (ಪಿಬಿಎಸ್)

ನಗರಾಡಳಿತ ಮತ್ತು ಸಹಯೋಗಿ ಸಂಸ್ಥೆಗಳ ಒಡೆತನದಲ್ಲಿ ಮತ್ತು ಉಸ್ತುವಾರಿಯಲ್ಲಿ ಓಡುವ ಈ ವ್ಯವಸ್ಥೆಯಲ್ಲಿ ಸೈಕಲ್‍ಗಳನ್ನು ತಾತ್ಕಾಲಿಕ ಬಳಕೆಗಾಗಿ, ಸುಲಭ ಬಾಡಿಗೆಯ ಆಧಾರದ ಮೇಲೆ, ಸ್ಥಳೀಯರಿಗೂ,ಹೊರಗಿನವರಿಗೂ ಎರವಲು ನೀಡಲಾಗುತ್ತದೆ.  “ಟ್ರಿಣ್‍ಟ್ರಿಣ್” ಸೇವೆಗಾಗೆಂದೇ ಮೈಸೂರಿನಲ್ಲಿ ೫೨ ‘ಹಬ್’ ಕೇಂದ್ರಗಳನ್ನು ತೆರೆದು, ಅವುಗಳ ಮುಖಾಂತರ ಸದ್ಯಕ್ಕೆ ೪೫೦ ಸೈಕಲ್‍ಗಳ ಹಂಚಿಕೆಗೆ ಏರ್ಪಾಡು ಮಾಡಲಾಗಿದೆ. ಆಸಕ್ತ ಸವಾರರು ಇಂಥ ಯಾವುದೇ ‘ಹಬ್’ನಲ್ಲಿ ಹಣ ಪಾವತಿಸಿ ಸೈಕಲನ್ನು ಪಡೆದು, ಸವಾರಿ ಮುಗಿದ ಮೇಲೆ, ತಮಗೆ ಹತ್ತಿರವಾದ ಒಂದು ‘ಹಬ್’ನಲ್ಲಿ ಅದನ್ನು ಹಿಂದಿರುಗಿಸುವರು. ಪರಿಸರ-ಸ್ನೇಹಿ ಮತ್ತು ಬ್ಯಾಟರಿ-ಚಾಲಿತ ಸೈಕಲ್‍ಗಳ ತಯಾರಿಕೆಯಲ್ಲಿ ಹೆಸರು ಮಾಡಿರುವ ಮತ್ತು “ಸೈಕಲ್ ಸವಾರಿ ಸಂಸ್ಕೃತಿ”ಯನ್ನು ನಾಗರಿಕರಲ್ಲಿ ಬೆಳೆಸಲು ಶ್ರಮಿಸುತ್ತಿರುವ ಮೈಸೂರಿನ “ಗ್ರೀನ್ ವೀಲ್ ರೈಡ್” ಉದ್ಯಮದವರು “ಟ್ರಿಣ್‍ಟ್ರಿಣ್” ವ್ಯವಸ್ಥೆಯನ್ನು ಚಾಲಿಸಲಿದ್ದಾರೆ.© 2017 Trin Trin | All Rights Reserved