ಸೈಕಲ್ ಸವಾರಿ ಸರದಾರರೇ, ಬನ್ನಿ
‘ಮೈಸೂರು ಮಾಯೆ’ ರಸವನ್ನು ಹೀರಿ ಪುಳಕಗೊಳ್ಳಿ

ಬೆರಗಿನ ಬೀಡು

ಮೈಸೂರಿನ ಪರಿಚಯವನ್ನು ಕೇಳುವ ಕನ್ನಡಿಗರೂ ಉಂಟೇ? ಈ ನಗರಿಯ ಐತಿಹಾಸಿಕ, ಸಾಂಸ್ಕೃತಿಕ, ನೈಸರ್ಗಿಕ ಐಸಿರಿಯು ಲೋಕವಿಶ್ರುತ. ಆದರೂ ಮೈಸೂರಿನ ಮೇಲ್ಮೆ ಅದರ ಮೇಲ್ಮೈ ಸಿರಿಗಿಂತಲೂ ಹೆಚ್ಚಾಗಿ ಅದರ ಅನನ್ಯ ಅಂತಃಸತ್ತ್ವದಲ್ಲಿ, ಅದರದೇ ಆದೊಂದು ಪ್ರಚಂಡ, ಪ್ರಪಂಚಾಕರ್ಷಕ ಪ್ರತಿಭೆಯಲ್ಲಿ ಅಡಗಿದೆ. ಈ ಮಹಿಮೆಯಿಂದಲೇ ಮೈಸೂರು ತನ್ನ ನಿವಾಸಿಗಳ ಹೃದಯದೇಗುಲದ ನಿವಾಸಿಯಾಗಿದೆ; ತನ್ನ ಸೊಬಗು-ಸಜ್ಜನಿಕೆಗಳಿಂದ ಸಂದರ್ಶಕರನ್ನು ಮಂತ್ರಮುಗ್ಧವಾಗಿಸಿ, ಅವರು ಇಲ್ಲಿಗೆ ಮತ್ತೆ ಮತ್ತೆ ಬರುವಂತೆ ಸೆಳೆಯುತ್ತಿದೆ. ಮೈಸೂರಿನ ಮೂಲವನ್ನು ಕುರಿತಂತೆ, ಈ ನಗರದ ಅತ್ಯುಜ್ಜ್ವಲ ಚಿಹ್ನೆಯಾದ ಚಾಮುಂಡಿ ಬೆಟ್ಟದ ಸುತ್ತ ದಂತಕಥೆಗಳು, ಅಲಿಖಿತ ಐತಿಹ್ಯಗಳು, ಜಾನಪದ-ಪೌರಾಣಿಕ ಕಥನ-ಕವನಗಳು, ಎಲ್ಲವೂ ಒಂದು ಸ್ವಾರಸ್ಯಕರ ಮಾಹಿತಿಜಾಲವನ್ನೇ ಹೆಣೆದಿವೆ. ಮೈಸೂರು ಐತಿಹಾಸಿಕ  ಕಾಲಮಾನಕ್ಕೆ ಬರುತ್ತಿದ್ದಂತೆಯೇ, ಒಡೆಯರ್ ಸಂತತಿಯ ಮಹಾರಾಜರು ಅದರ ಭಾಗ್ಯವಿಧಾತರಾಗಿ ಹೊರಹೊಮ್ಮಿ, ಅದನ್ನು ಕ್ರಮೇಣ “ಬೆರಗಿನ ಬೀಡು” ಎಂದಾಗುವ ಮಟ್ಟಕ್ಕೆ ರೂಪಾಂತರಿಸಿದರು.  ಒಡೆಯರ್‍ಗಳು ಉಡುಗೊರೆಯಾಗಿತ್ತು ಹೋದ ಅತ್ಯಂತ ಅಮೂಲ್ಯ ಆಸ್ತಿಯೆಂದರೆ ಬೆಡಗು-ಬೆರಗುಗಳ ಈ ಬೃಹನ್ಮೈಸೂರೇ.  ಸ್ವಾತಂತ್ರ್ಯಪೂರ್ವಕ್ಕೆ ಮುನ್ನ ಭಾರತದ ಅಭಿವೃದ್ಧಿಯ ಮೇರು ಮಾದರಿಯಾಗಿ ಬೆಳಗತೊಡಗಿತ್ತು ಮೈಸೂರು.

ರಾಜನ್ಯ ಮೈಸೂರಿನ ಪ್ರಜ್ವಲ ಪ್ರತೀಕಗಳು ಮತ್ತು ಕಂಗೊಳಿಸುವ ಕೊಡುಗೆಗಳೆಡೆಗೆ ಹೊರಳಿದಲ್ಲಿ, ಪಾರಂಪರಿಕ ವಾಸ್ತುಶಿಲ್ಪ ರಚನೆಗಳು ಮತ್ತು ಜನಪೂಜ್ಯ ಶಿಲ್ಪಕೃತಿಗಳು ಇಲ್ಲಿ ಹೆಜ್ಜೆಹೆಜ್ಜೆಗೂ ಪುಟಿದೇಳುತ್ತವೆ. ಅವುಗಳಲ್ಲಿ ನಿಸ್ಸಂದೇಹವಾಗಿ ಶಿಖರಪ್ರಾಯವಾದುದು, ಭಾರತ ಭೂಪಟದ ಪ್ರಧಾನ ಲಕ್ಷಣಗಳಲ್ಲೊಂದಾದ ಮತ್ತು  ಹಲವು ಬಾರಿ ಈ ದೇಶದ ಅತ್ಯಂತ ಅಧಿಕ ವಿದೇಶಿಪ್ರವಾಸಿಗರ “ಪಾದಸ್ಪರ್ಶ”ವನ್ನು ದಾಖಲಿಸಿರುವ ವಿಶ್ವಾದ್ಭುತ ಮೈಸೂರು ಅರಮನೆ. ಆಕರ್ಷಣೆಯ ವಿಷಯದಲ್ಲಿ, ಮೈಸೂರು ಮೃಗಾಲಯೋದ್ಯಾನವೇನೂ ಕಡಮೆ  ಜಾಜ್ವಲ್ಯಮಾನವಾದುದಲ್ಲ.  ಇನ್ನು ಸಾಂಸ್ಕೃತಿಕ ವಲಯದೊಳಹೊಕ್ಕರಂತೂ, ಶುರುವಿನಲ್ಲೇ ಮೈಸೂರು ತನ್ನ ಅದ್ವಿತೀಯ ದಸರಾ ಉತ್ಸವನ್ನು ಹೊಳಪಿಸುತ್ತದೆ; ಜೊತೆಗೆ ಇದರ ಸಮಾಪನ ಸಂಭ್ರಮವಾದ ಜಗನ್ಮೋಹಕ “ಜಂಬೂಸವಾರಿ” ಮೆರವಣಿಗೆಯನ್ನೂ ಹೆಮ್ಮೆಯಿಂದ ಹೊರತೋರುತ್ತದೆ.

ಉದ್ಯಾನಗಳು, ಉಪವನಗಳು, ವೃಕ್ಷವೀಧಿಗಳು,  ವಾಯುವಿಹಾರ ಪಥಗಳು, ಜಲವಿಹಾರ ಪ್ರದೇಶಗಳು, ಕಾರಂಜಿಗಳು, ಸರೋವರಗಳು ಮೊದಲಾದುವಲ್ಲದೆ,  ವಿವಿಧ ವಸ್ತು ಸಂಗ್ರಹ-ಪ್ರದರ್ಶನಾಲಯಗಳು, ಸಂಗೀತ-ನೃತ್ಯ ಮಂಟಪಗಳು, ಕ್ರೀಡಾಂಗಣಗಳು ಇತ್ಯಾದಿ ನಾಗರಿಕ ಸೌಲಭ್ಯಗಳಿಗೂ ಮೈಸೂರು ಹೆಸರುವಾಸಿಯಾಗಿದೆ. ಲಾಗಾಯಿತಿನಿಂದಲೂ ಮೈಸೂರು ಒಂದು ಉನ್ನತ ವಿದ್ಯಾಪೀಠವಾಗಿದ್ದು, ಇದೀಗ ಶತಮಾನೋತ್ಸವವನ್ನು ಆಚರಿಸಿರುವ ಮೈಸೂರು ವಿಶ್ವವಿದ್ಯಾನಿಲಯವು ಇದಕ್ಕೆ ದ್ಯೋತಕ ದೃಷ್ಟಾಂತವಾಗಿದೆ.  ಸಂಗೀತ-ಕಾವ್ಯ, ನೃತ್ಯ-ನಾಟಕ, ಚಿತ್ರಕಲೆ-ಶಿಲ್ಪಕಲೆ ಮುಂತಾದ ಬಗೆಬಗೆಯ ಕಲಾಪ್ರಕಾರಗಳಿಗೂ ಮೈಸೂರು ಒಂದು ಬಹುಮಾನ್ಯ ನೆಲೆಯಾಗಿದ್ದು, ಅನೇಕ ಕಲೆಗಳಲ್ಲಿ ಮೈಸೂರಿನ ವಿಶಿಷ್ಟ ಛಾಪು ಎದ್ದುಕಾಣುತ್ತದೆ. ಈಚಿನ ವರ್ಷಗಳಲ್ಲಿ, ಯೋಗಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸೆ ಕ್ಷೇತ್ರಗಳಲ್ಲೂ ಮೈಸೂರು ವಿದೇಶಿ ಪ್ರವಾಸಿಗರಿಗೆ ಒಂದು ಅಗ್ರಸ್ಥಾನವಾಗಿ ಬೆಳೆದಿದೆ.

ಇವೆಲ್ಲವನ್ನೂ ಮೀರಿ, “ಮೈಸೂರು” ಎಂದೊಡನೆ ಜನಮನದಲ್ಲಿ ಮೈಸೂರು ಸಿಲ್ಕ್, ಮೈಸೂರು ಶ್ರೀಗಂಧ, ಮೈಸೂರು ಅಗರಬತ್ತಿ, ಮೈಸೂರು ವರ್ಣಚಿತ್ರಗಳು, ಮೈಸೂರು ಕರಿಮರ ಕೆತ್ತನೆ ಕೆಲಸಗಳು, ಮೈಸೂರು ಪೇಟ, ಮೈಸೂರು ಟಾಂಗಾ (ಕುದುರೆ ಗಾಡಿ), ಮೈಸೂರು ಪಾಕು, ಮೈಸೂರು ವೀಳೆಯದೆಲೆ, ಮೈಸೂರು ಮಲ್ಲಿಗೆ ಇವೆಲ್ಲದರ ಒಂದು ಸಮ್ಮೋಹಕ  ಜಂಬೂಸವಾರಿಯೇ ಸಾಗುತ್ತದೆ.  “ಬ್ರ್ಯಾಂಡ್ ಮೈಸೂರು”  ಸಂದೇಶವನ್ನು ವಿಶ್ವಾದ್ಯಂತ ಸಾರಲು ಈ “ಏಕಮಾತ್ರ ರಾಯಭಾರಿ”ಗಳಿಗಿಂತಲೂ ಅತಿಶಯವಾದ ಆಯ್ಕೆ ಎಲ್ಲಾದರೂ ಇದ್ದೀತೇ?

ವಾಸ್ತವವಾಗಿ, “ಮೈಸೂರು ಮಾಯೆ” ಅದರ ಹೊರಮೈಗೆ ಎಲ್ಲೆಗೂಡಿರುವ ಪ್ರದೇಶಗಳ ಉದ್ದಗಲಕ್ಕೂ ತೂರಿ ಹರಡಿದೆ ಮತ್ತು ಈ ವಿಸ್ತಾರದಲ್ಲಿ ಹುದುಗಿರುವ ಅನೇಕ ವಿಚಿತ್ರ-ವಿರಳ ಸಂದರ್ಶನ ಸ್ಥಳಗಳು ವಿಭಿನ್ನ ಪರ್ಯಟಕರ ಪೂರ್ವಗ್ರಹಿಕೆಗಳನ್ನು  ಕುಲುಕಿ, ವಿಲಕ್ಷಣ ಅನುಭವಗಳ ರಸದೌತಣವನ್ನು ಅವರ ಅರಿವುಗಳಿಗೆ  ಬಡಿಸುವಂಥ ಕಸುವನ್ನು ಪಡೆದಿವೆ.

ಸೈಕಲ್ ಉತ್ಸಾಹಿಗಳಿಗಂತೂ ಈ ಸಹಜ ಸನ್ನಿವೇಶವು ಒಂದು ಅಲೌಕಿಕ  ‘ಸೈಕಲ್ ಸಫ಼ಾರಿ’ ಅಥವಾ ‘ಸೈಕಲ್ ಸವಾರಿ ಸವಾಲು’ ಕೈಗೊಳ್ಳಲು ಹೇಳಿಮಾಡಿಸಿಟ್ಟ ಅವಕಾಶದಂತಿದೆ.© 2017 Trin Trin | All Rights Reserved